ಲೋಡ್ ಬೇರಿಂಗ್ ವಾಲ್ಸ
ವಾಲ್ (ಎಂದರೇನು? ಸಾಮಾನ್ಯವಾಗಿ ಲೋಡ್ ಬೇರಿಂಗ್ ವಾಲ್ಗಳು ಹೇಗೆ ಕೆಲಸಮಾಡುತ್ತವೆ? ವಾಲ್ ಎಂದರೆ ವಿಂಗಡಣೆಗೆ ಬಳಸುವ ಒಂದು ತರಹದ ತಡೆ. ಈ ವಾಲ್ನಲ್ಲಿ ಎರಡು ವಿಧ, ಭಾರ ಹೊರುವ ಗೋಡೆ, ಭಾರ ಹೊರದ ಗೋಡೆ.ಲೋಡ್ ಬೇರಿಂಗ್ ವಾಲ್ ಎಂದರೆ ಭಾರ ಹೊರುವ ಗೋಡೆ. ಹಾಗಾದರೆ ಎಲ್ಲಾ ಗೋಡೆಗಳೂ ಭಾರ ಹೊರುವದಿಲ್ಲವೇ? ಈ ಪ್ರಶ್ನೆಗೆ ಉತ್ತರ ಭಾರ ಹೊರುತ್ತವೆ. ಹಾಗಾದರೆ ಇವು ಹೇಗೆ ಲೋಡ್ ಬೇರಿಂಗ್ ವಾಲ್ ಆಗುವುದಿಲ್ಲ ಎಂಬ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ.
ನಾವು ಈ ವಿಷಯವಾಗಿ ಸ್ವಲ್ಪ ಸುಧೀರ್ಘವಾಗಿ ತರ್ಕಿಸುವುದಾದರೆ ಈ ಹಿಂದೆ ಅಂದರೆ ಸಿಮೆಂಟ್ನ ಆವಿಷ್ಕಾರ ಆಗುವುದಕ್ಕೂಮುಂಚಿತವಾಗಿ ಮನೆ, ಮಠ, ಮಂದಿರ, ಗುಂಬಜ್, ಕೋಟೆ, ಸುರಂಗಗಳು ಇವುಗಳನ್ನೆಲ್ಲಾ ಹೇಗೆ ನಿರ್ಮಿಸುತ್ತಿದ್ದರು? ಆಗ ಈ ಲೋಡ್ ಬೇರಿಂಗ್ ವಾಲ್, ಲೋಡ್ ಬೇರಿಂಗ್ ಅಲ್ಲದ ವಾಲ್ ಎಂಬ ವ್ಯತ್ಯಾಸವಿತ್ತೇ? ಎನ್ನುವುದನ್ನು ಹುಡುಕುತ್ತಾ ಹೊರಟಾಗ, ಮೊದಲು ನಮಗೆ ಕಾಣಸಿಗುವುದು ಹಿಂದಿನ ದಿನಗಳಲ್ಲಿ ಇವುಗಳನ್ನೆಲ್ಲಾ ಕಟ್ಟಲು ಬಳಸುತ್ತಿದ್ದ ವಸ್ತುಗಳು ಮಣ್ಣು, ಕಟ್ಟಿಗೆ, ಹೆಂಚು, ಕೆಂಪು ಕಲ್ಲು, ಶಿಲೆ, ಸುಣ್ಣ, ಬೆಲ್ಲ ಇವುಗಳೇ ಅವರು ಬಳಸುತ್ತಿದ್ದ ಮೂಲವಸ್ತುಗಳು. ಆದರೆ ಈ ಸಿಮೆಂಟ್ ಬಂದ ಮುಂದಿನ ದಿನಮಾನಗಳಲ್ಲಿ, ಸಿಮೆಂಟ್, ಸ್ಟೀಲ್, ಬ್ರಿಕ್ಸ, ಸಿಮೆಂಟ್ ಬ್ಲೋಕ್, ಕಲ್ಲು, ಟೈಲ್ಸ್ ಮುಂತಾದವು ಆಗ ಶುರುವಾದ ಮೂಲವಸ್ತುಗಳು. ಇದರಿಂದಲೇ ಶುರುವಾಗಿದ್ದು ಕೊಂಕ್ರೀಟ್ ಫ್ರೇಮ್ ಸ್ಟ್ರಕ್ಚರ್ಗಳ ಉದಯ. ಫೂಟಿಂಗ್ಗಳು, ರಾಫ್ಟಗಳು, ಫೈಲ್ಸಗಳು, ವೆಲ್ ಗಳು ಹೀಗೆ ನಾನಾ ತರದ ಫೌಂಡೇಷನ್ ಬಳಸಿ ಅವುಗಳ ಮೇಲೆ ಪೆಡಸ್ಟಲ್, ಪಿಯರ್ಸ,ಕೊಲಮ್, ಕೊಂಕ್ರೀಟ್ವಾಲ್, ಪ್ಲಿಂತ್ಬೀಮ್, ಕೊಲಮ್, ರೂಫ್ಬೀಮ್, ಸ್ಲಾಬ್ಗಳನ್ನು ಹಾಕಿ ಅನೇಕ ಮಹಡಿಯ ಭಾರವೂ ಈ ಸ್ಲಾಬ್, ರೂಫ್ಬೀಮ್, ಕೋಲಮ್, ಪ್ಲಿಂತ್ಬೀಮ್ಗಳ ಮೂಲಕ ಫೂಟಿಂಗ್, ರಾಫ್ಟ, ಫೈಲ್ಸಗಳು, ವೆಲ್ಗಳಿಗೆ ಬಂದು ಅಲ್ಲಿಂದ ಭೂಮಿಗೆ ವರ್ಗಾವಣೆ ಆಗುವಂತಹ ಪರಿರ್ತನೆಯನ್ನು ಕಂಡುಕೊಂಡಿದ್ದು.
ಈ ಫ್ರೇಮ್ ಸ್ಟ್ರಕ್ಚರ್ಗಳ ಒಳಗೆ ತಮ್ಮ ಅವಶ್ಯಕತೆಗೆ ತಕ್ಕಂತೆ ತನ್ನ ಭಾರ ಬಿಟ್ಟು ಬೇರೆ ಯಾವುದೇ ಭಾರ ಬರದಂತಹ ಗೋಡೆಗಳನ್ನು ನಿರ್ಮಿಸಿ, ಈ ಗೋಡೆಗಳನ್ನೇ ಲೋಡ್ ಬೇರಿಂಗ್ ಅಲ್ಲದ ವಾಲ್ಗಳು ಎಂದು ಹೆಸರಿಸಲಾಯಿತು. ಮಿಕ್ಕವು ಲೋಡ್ ಬೆಯರಿಂಗ್ ವಾಲ್ಗಳಾದವು. ಅಂದರೆ ಯಾವ ವಾಲ್ ತನ್ನ ಭಾರವನ್ನಲ್ಲದೇ ಇತರ ಮೇಲಿನ ಎಲ್ಲಾ ಭಾರವನ್ನೂ ಹೊರುತ್ತದೆಯೋ ಅವೇ ಲೋಡ್ ಬೇರಿಂಗ್ ವಾಲ್ಗಳಾದವು. ಹಾಗಾದರೆ ಸಿಮೆಂಟ್ ಬರುವ ಪೂರ್ವದಲ್ಲಿ ಕಟ್ಟಿದ್ದೆಲ್ಲಾ ಲೋಡ್ ಬೇರಿಂಗ್ ವಾಲ್ಗಳೇ? ಅಲ್ಲ, ಇದು ತಪ್ಪುಗ್ರಹಿಕೆ. ಆಗಲೂ ಸಹ ಕಲ್ಲಿನ ಕಂಬಗಳನ್ನ, ಕಮಾನುಗಳನ್ನ ಬಳಸಿ, ಕಲ್ಲಿನ ಫ್ರೇಮ್ ಸ್ಟ್ರಕ್ಚರ್ಗಳನ್ನ ಬಳಸಿ ಲೋಡ್ ಬೇರಿಂಗ್ ಅಲ್ಲದ ವಾಲ್ಗಳನ್ನೂ ಕಟ್ಟುತ್ತಿದ್ದರು. ಆದರೆ ವ್ಯತ್ಯಾಸ ಇಷ್ಟೇ ಬಹುಮಹಡಿ ಕಟ್ಟಲು ಇಲ್ಲಿ ಆಸ್ಪದ ಕಡಿಮೆ ಇತ್ತು.
ಈ ಲೋಡ್ ಬೇರಿಂಗ್ ವಾಲ್ ಗಳನ್ನ ಹಲವು ರೀತಿಯಲ್ಲಿ ಇದರಮೇಲೆ ಬರುವ ಭಾರವನ್ನು ಆಧರಿಸಿ ಅದಕ್ಕೆ ಅನುಗುಣವಾಗಿ ಕಟ್ಟುತ್ತಾರೆ, ಇದರಮೇಲೆ ಬರುವ ಭಾರವನ್ನೇ ಆಧರಿಸಿ ಯಾವುದರಿಂದ ಕಟ್ಟುವುದು ಮತ್ತು ಎಷ್ಟು ದಪ್ಪದಲ್ಲಿ ಕಟ್ಟುವುದು ಎಂದು ನಿರ್ಧರಿಸಿ ಅದಕ್ಕೆ ಸರಿ ಹೊಂದುವಂತಹ ಗಾರೆಯನ್ನು ಅಂದರೆ ಮೊರ್ಟರ್ ಉಪಯೋಗಿಸಿ ಕಟ್ಟುವುದು ರೂಢಿಯಲ್ಲಿದೆ, ಇನ್ನು ಕೆಲವು ಸಂದರ್ಭಗಳಲ್ಲಿ ಇವುಗಳ ಎತ್ತರವನ್ನೂ ಸಹ ಗಣನೆಗೆ ತೆಗೆದುಕೊಂಡು ದಪ್ಪವನ್ನು ಮತ್ತು ಕಟ್ಟುವ ರೀತಿಯನ್ನು ನಿರ್ಧರಿಸುವುದುಂಟು, ಶಿಲೆಯನ್ನು ಮಾತ್ರ ಉಪಯೋಗಿಸಿ ಕಟ್ಟುವಂತಹ ದೇವಸ್ಥಾನಗಳು, ಗುಂಬಜ್ ಗಳು ಕೋಟೆಗಳು, ಸುರಂಗಗಳು, ಸುರಕ್ಷತೆಗೆೋಸ್ಕರ ನಿರ್ಮಿಸುವ ಭೂಮಿಯ ಒಳಗಿನ ಮಹಡಿ ಅಂದರೆ ಅಂಡರ್ ಗ್ರೌಂಡ್ ಫ್ಲೋರ್ ಇಂತಹ ಕಟ್ಟಡಗಳನ್ನ ಕಟ್ಟುವಾಗ ಅತ್ಯಂತ ಹೆಚ್ಚು ಕಾಲ ಬಾಳಿಕೆ ಬರುವಂತಹ ಶಿಲೆಗಳನ್ನೇ ಆಯ್ದು ಅಚ್ಚುಕಟ್ಟಾಗಿ ಇವುಗಳನ್ನ ಕೆತ್ತಿ ಇವುಗಳಲ್ಲೇ ಲೊಕಿಂಗ್ ಆಗುವಂತಹ ಮತ್ತು ಯಾವುದೇ ಬೊಂಡಿಂಗ್ ಮಟೀರಿಯಲ್ಲನ್ನೂ ಬಳಸದೇ ನೀರನ್ನೂ ಸಹ ಸೋರಲು ಬಿಡದಂತೆಮಾಡಿ ಕಟ್ಟಿದಂತಹ ಸಹಸ್ರಾರು ವರ್ಷಗಳಿಂದ ಇನ್ನೂ ತಲೆಎತ್ತಿ ನಿಂತಿರುವ ಕಟ್ಟಡಗಳು ಇಂದಿಗೂ ಕಾಣಸಿಗುತ್ತವೆ.
ಈಗ ನಾವು ಲೋಡ್ ಬೇರಿಂಗ್ ವಾಲ್ ಕಟ್ಟಲು ಬಳಸುತ್ತಿರುವುದು ಶಿಲೆ ಕಲ್ಲು ಅಂದರೆ ಸೈಜ್ ಸ್ಟೋನ್, ಲೇಟರೈಟ್ ಸ್ಟೋನ್, ಬ್ರಿಕ್ಸ, ಬ್ಲೋಕ್ಸ ಇವುಗಳನ್ನ ಹೆಚ್ಚಾಗಿ ಬಳಸುತ್ತಿದ್ದೇವೆ, ಇವುಗಳಲ್ಲಿ ಸೈಜ್ ಸ್ಟೋನ್ ನನ್ನ ಭೂಮಿಯ ಒಳಹೋಗುವ ಭಾಗಕ್ಕೂ ಉಳಿದವನ್ನ ಭೂಮಿಯಿಂದ ಮೇಲೆ ಬರುವ ಲೋಡ್ ಬೇರಿಂಗ್ ವಾಲ್ ಗಳಿಗೆ ಬಳಸುವುದು ಸರ್ವೇಸಾಮಾನ್ಯವಾಗಿ ಕಾಣಸಿಗುವ ಪದ್ದತಿ. ಇವುಗಳಲ್ಲಿ ಪ್ರಕೃತಿದತ್ತವಾದವುಗಳೆಂದರೆ ಶಿಲೆ ಕಲ್ಲು,ಲೇಟರೈಟ್ ಸ್ಟೋನ್, ಇವುಗಳಿಗಿರುವ ಬಾಳಿಕೆ ನಿಮಗೆ ಈ ಕೃತಕ ಬ್ರಿಕ್ಸ, ಬ್ಲೋಕ್ಸ ಗಳಲ್ಲಿ ಸಿಗವುದಿಲ್ಲ, ಶಿಲೆ ಮತ್ತು ಲೇಟರೈಟ್ ಗಳಿಗೆ ನೀವು ಹಲವು ರೂಪಗಳನ್ನ ಇವುಗಳಲ್ಲಿ ಕೆತ್ತನೆಗಳನ್ನ ಕಲಾಕೃತಿಗಳನ್ನ ರಚಿಸಿ ಯಾವುದೇ ಬೊಂಡಿಂಗ್ ಮಟೀರಿಯಲ್ ಗಳನ್ನ ಬಳಸದೇ ಇವುಗಳಿಂದ ಅತ್ಯಂತ ಸುಂದರ ಮತ್ತು ಧೀರ್ಘಕಾಲ ಬಾಳುವಂತಹ ಮನೆ ಮತ್ತು ಕಟ್ಟಡಗಳನ್ನ ಕಟ್ಟಬಹುದು,ಹಾಗಾಗಿ ನಿಸರ್ಗದತ್ತವಾದುದನ್ನ ಬಳಸಿಕೊಳ್ಳುವುದನ್ನೇ ಜಾಣತನ ಎನ್ನಬಹುದು.

ಕಾಮೆಂಟ್‌ಗಳು